ಕಾಲಿನ್ಸ್, ವಿಲಿಯಂ ವಿಲ್ಕಿ

1824-1889. ಇಂಗ್ಲಿಷ್ ಕಾದಂಬರಿಕಾರ ಕಲಾವಿದನೊಬ್ಬನ ಮಗ, ಹುಟ್ಟಿದ್ದು ಲಂಡನ್ನಿನಲ್ಲಿ. ವಿದ್ಯಾಭ್ಯಾಸ ಖಾಸಗಿಯಾಗಿ ನಡೆಯಿತು. ಇಟಲಿಯಲ್ಲಿ ಸ್ವಲ್ಪ ಕಾಲ ಕಳೆದು ಅನಂತರ 1851ರಲ್ಲಿ ವಕೀಲನಾದ. 1848ರಲ್ಲಿ ತನ್ನ ತಂದೆಯ ಜೀವನಚರಿತೆಯನ್ನು ಬರೆದ. 1850ರಲ್ಲಿ ಆಂಟೊನಿನಾ ಎಂಬ ಮೊದಲ ಕಾದಂಬರಿಯನ್ನು ಪ್ರಕಟಿಸಿದ. 1851ರಲ್ಲಿ ಚಾಲ್ರ್ಸ್ ಡಿಕನ್ಸ್‍ನ ಸ್ನೇಹ ಬೆಳೆಸಿ ಆತನ ಅನೇಕ ಬರೆಹಗಳಲ್ಲಿ ಪಾಲುಗೊಂಡ. ದಿ ವುಮನ್ ಇನ್ ವೈಟ್ ನಿಗೂಢತೆಯ ಕಾದಂಬರಿ (1860) ಮತ್ತು ದಿ ಮೂನ್‍ಸ್ಟೋನ್ (1868) ಉತ್ತಮ ಪತ್ತೇದಾರಿ ಕಾದಂಬರಿ. ಹೈಡ್ ಅಂಡ್ ಸೀಕ್ (1854), ನೋ ನೇಮ್ (1862), ಅರ್ಮಡೇಲ್ (1866) ಇವು ಈತನ ಇತರ ಕಾದಂಬರಿಗಳು.      

(ಎಚ್.ವಿ.ಎಸ್.)

 ಕಾಲಿನ್ಸ್ ಇಂಗ್ಲಿಷ್ ಸಾಹಿತ್ಯದಲ್ಲಿ ಪತ್ರೇದಾರಿ ಕಥಾಸಾಹಿತ್ಯದ ಜನಕ ಎನ್ನಬಹುದು. ಇವನ 'ದಿ ಮೂನ್ ಸ್ಟೋನ್' ಇಂಗ್ಲೆಂಡಿನ ಮೊದಲನೆಯ ಪತ್ರೇದಾರಿ ಕಾದಂಬರಿ, ಇದನ್ನು ಟಿ.ಎಸ್. ಎಲಿಯಟ್ 'ಪತ್ತೇದಾರಿ' ಕಾದಂಬರಿಗಳಲ್ಲಿ ಮೊದಲನೆಯದು ಅತಿ ದೀರ್ಘವಾದದ್ದು ಮತ್ತು ಅತ್ಯುತ್ತಮವಾದದ್ದು' ಎಂದು ವರ್ಣಿಸಿದ. ಕಾಲಿನ್ಸ್ ಕಥಾ ವಸ್ತುವನ್ನು ಬಹು ಎಚ್ಚರಿಕೆಯಿಂದ ಕಟ್ಟುತ್ತಾನೆ. ಪ್ರತಿಯೊಂದು ವಿವರಕ್ಕೂ ಗಮನಕೊಡುತ್ತಾನೆ. ನಮ್ಮ ಆಸಕ್ತಿಯನ್ನು ಗೆಲ್ಲುವ ಪಾತ್ರಗಳನ್ನು ಸೃಷ್ಟಿ ಮಾಡುತ್ತಾನೆ. ವಾಲ್ಟರ್ ಆ್ಯಲೆನ್ ಎನ್ನುವ ವಿಮರ್ಶಕ, ಇವನು ಯಾಂತ್ರಿಕ ಕಥಾವಸ್ತು ಮತ್ತು ಪಾತ್ರಗಳು ಇವುಗಳ ನಡುವೆ ಸಮತೋಲನವನ್ನು ಸಾಧಿಸುತ್ತಾನೆ ಎಂದಿದ್ದಾನೆ.

(ಎಲ್.ಎಸ್.ಎಸ್.)

(ಪರಿಷ್ಕರಣೆ: ಎಲ್. ಎಸ್. ಶೇಷಗಿರಿರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ